ಸಿವಿಲ್
1946ರ ಲಾಗಾಯ್ತು ಇಂಗ್ಲೆಂಡನ್ನು ಸರ್ಕ್ಯೂಟುಗಳಾಗಿ ವಿಭಾಗಿಸಲಾಗಿ ಪ್ರತಿ ಸರ್ಕ್ಯೂಟಿಗೆ ಸಂಬಂಧಿಸಿದ ನ್ಯಾಯಾಧೀಶ ತನ್ನ ಸರ್ಕ್ಯೂಟಿನ ಒಳಗೆ ಪರಿಭ್ರಮಣ ಮಾಡುತ್ತ ತಕ್ಕೆಡೆಗಳಲ್ಲಿ ನಿಂತು ನ್ಯಾಯ ಕೊಡುತ್ತಿರುತ್ತಾನೆ. ಇವುಗಳಿಗೆ ಕೌಂಟಿ ಕೋರ್ಟುಗಳೆಂದು ಹೆಸರು. ಇವುಗಳು 200 ಪೌಂಡುಗಳವರೆಗಿನ ಪರಿಹಾರ ಕೇಳಿದ ವ್ಯವಹಾರಗಳನ್ನು ತೆಗೆದುಕೊಳ್ಳುವುದು ಸಾಧ್ಯ. ಅದಕ್ಕಿಂತ ಹೆಚ್ಚಿನ ಪರಿಹಾರ ಕೇಳಿದಲ್ಲಿ ವಾದಿ ಪ್ರತಿವಾದಿಗಳು ಒಪ್ಪಿದರೆ ಮಾತ್ರ ಅಲ್ಲಿ ತನಿಖೆ ಸಾಧ್ಯ. ಕೆಲವು ವಿಚಾರಗಳಲ್ಲಿ ತನಿಖೆಯ ಹಕ್ಕೇ ಇಲ್ಲ. ಅವುಗಳ ತೀರ್ಮಾನದ ಮೇಲೆ ಕೋರ್ಟ್ ಆಫ್ ಅಪೀಲಿಗೆ ಅಹವಾಲು ಕೊಂಡು ಹೋಗುವ ಅಧಿಕಾರವನ್ನು ಹೆಚ್ಚಾಗಿ ಕೊಡಲಾಗಿದೆ.

ಹೈಕೋರ್ಟ್ ಆಫ್ ಅಪೀಲ್ ಮತ್ತು ಹೈಕೋರ್ಟ್ ಆಫ್ ಜಸ್ಟಿಸ್ ಇವೆರಡೂ ಸುಪ್ರೀಂ ಕೋರ್ಟ್, ಜ್ಯುಡಿಕೇಚರ್ ಎಂಬ ಹೆಸರಿನಿಂದ ನಡೆಯುತ್ತವೆ. ಹೈಕೋರ್ಟ್ ಆಫ್ ಜಸ್ಟಿಸಿನಲ್ಲಿ ಚಾನ್ಸರಿ, ಕಿಂಗ್ಸ್ ಬೆಂಚ್ ಮತ್ತು ಪ್ರೊಬೇಟ್, ಡೈವರ್ಸ್ ಮತ್ತು ಅಡ್ಮಿರಲ್ಟಿ ಎಂಬ ವಿಭಾಗಗಳಿವೆ. ಸುಪ್ರೀಂ ನ್ಯಾಯಾಲಯದ ಮೇಲಿನ ತೀರ್ಮಾನದ ಹಕ್ಕು ಹೌಸ್ ಆಫ್ ಲಾಡಿರ್ಸ್ಗೆ ಇದೆ. ಆದರೆ ಅಲ್ಲಿಗೆ ಅಪೀಲು ಹೋಗಬೇಕಾದಲ್ಲಿ ಕೋರ್ಟ್ ಆಫ್ ಅಪೀಲಿನ ಒಪ್ಪಿಗೆ ಅಥವಾ ಲಾಡ್ರ್ಸ್ ಸಭೆಯ ಒಪ್ಪಿಗೆ ಬೇಕು.

ಕ್ರಿಮಿನಲ್
ಕ್ರಿಮಿನಲ್ ಅಪರಾಧಗಳನ್ನು ತಪ್ಪು ಹೊರಿಸಬಹುದಾದದ್ದು ಮತ್ತು ಕ್ಷಿಪ್ರ (ಸಮ್ಮರಿ) ಎಂದು ವಿಭಾಗ ಮಾಡಲಾಗಿದೆ. ಮೊದಲನೆಯವು ಹೆಚ್ಚಾಗಿ ದೊಡ್ಡ ತಪ್ಪುಗಳು. ಈ ಮೊಕದ್ದಮೆಗಳನ್ನು ಆಪಾದಿತ ಒಪ್ಪಿದರೆ ನ್ಯಾಯಾಧೀಶರು ತಮ್ಮ ಕೋರ್ಟುಗಳಲ್ಲಿ ತನಿಖೆ ಮಾಡುವರು. ಅವರ ತೀರ್ಪಿನ ಮೇಲೆ ಹೆಚ್ಚಾಗಿ ಕಂಟ್ರಿ ಕ್ವಾರ್ಟರ್ ಸೆಷನ್ನಿಗೆ ಅಪೀಲು ಇದೆ. ತಪ್ಪು ಹೊರಿಸಬಲ್ಲ ಅಪರಾಧದಲ್ಲಿ ಪೆಟಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ನೋಟಕ್ಕೇ (ಪ್ರೈಮ ಫೇಷಿ) ಅಪರಾಧ ಕಂಡುಬಂದರೆ ಆ ಅಪರಾಧವನ್ನು ತೀರ್ಮಾನಕ್ಕೆ ಅಸೈಜಿಗೆ ನ್ಯಾಯಾಲಯಕ್ಕಾಗಲಿ ಕ್ವಾರ್ಟರ್ ಸೆಷನ್ನಿಗಾಗಲಿ ಕಳುಹಿಸುತ್ತದೆ. ಅಸೈಜಿಗೆ ಮಾತ್ರ ಕೆಲವು ಘೋರ ಅಪರಾಧಗಳನ್ನು ತನಿಖೆ ಮಾಡುವ ಹಕ್ಕಿದೆ. ಆಗ ನ್ಯಾಯದರ್ಶಿಗಳು ಅವರೊಂದಿಗೆ ಇರುತ್ತಾರೆ. ಲಂಡನ್ನಿನಲ್ಲಿ ಈ ನ್ಯಾಯಾಲಯ ಓಲ್ಡ್ ಬೈಲಿಯಲ್ಲಿ ಮೊಕದ್ದಮೆಗಳನ್ನು ವಿಚಾರಣೆ ನಡೆಸುತ್ತದೆ. ಕ್ವಾರ್ಟರ್ ಸೆಷನ್ನಿನಲ್ಲಿ ತನಿಖೆ ಮಾಡುವಾಗ ನ್ಯಾಯದರ್ಶಿಗಳೊದಿಗೆ ಜಡ್ಜರು ಅಥವಾ ರೆಕಾರ್ಡರ್ ಕುಳಿತುಕೊಳ್ಳುತ್ತಾರೆ. ಪೆಟಿ ಸೆಷನ್ಸ್ ಅಪೀಲುಗಳ ತನಿಖೆ ನ್ಯಾಯಾಧೀಶರಿಂದಲೇ ಆಗುತ್ತದೆ. ಅಸೈಜ್ ಮತ್ತು ಕ್ವಾರ್ಟರ್ ಸೆಷನ್ನಿನಿಂದ ಬಂದ ಕ್ರಿಮಿನಲ್ ಅಪೀಲುಗಳನ್ನು ಕನಿಷ್ಠ ಪಕ್ಷ ಮೂರು ಜನ ಕಿಂಗ್ಸ್ ಬೆಂಚ್ ಜಡ್ಜರಿಂದ ಕೂಡಿದ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್ ತೀರ್ಮಾನ ಮಾಡುತ್ತದೆ. ಪ್ರಮುಖವಾದ ನ್ಯಾಯನಿಷ್ಕರ್ಷೆಯ ವಿಚಾರವಿದ್ದರೆ ಹೌಸ್ ಆಫ್ ಲಾರ್ಡ್ಸ್ಗೆ ಕೋರ್ಟಿನ ತೀರ್ಮಾನದ ಮೇಲೆ ಅಪೀಲು ಮಾಡಬಹುದು. ಆದರೆ ಇದಕ್ಕೆ ಅಟಾರ್ನಿ ಜನರಲನ ಅನುಮತಿ ಬೇಕು. ಇಂಗ್ಲೆಂಡಿನ ಕ್ರಿಮಿನಲ್ ನ್ಯಾಯದ ಒಂದು ವಿಶೇಷವೆಂದರೆ ಅನೇಕ ಮಂದಿ ಸಾಮಾನ್ಯ ಜನ ಯಾವುದೊಂದೂ ಸಂಬಳವಿಲ್ಲದೆ ಕೆಲಸ ಮಾಡುತ್ತಿರುವುದು. ಅವರಿಗೆ ಕಾನೂನಿನ ಶಿಕ್ಷಣವೇ ಬೇಕಂದಿಲ್ಲ. ಆದರೂ ಈ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ